ಸಾರೂಕಿನ್, ಪಿಟಿರಿಮ್ ಅಲೆಕ್ಸಾಂಡರೊವಿಚ್
	1889-1968. ರಷ್ಯನ್ ಮಾನವಶಾಸ್ತ್ರಜ್ಞ. 1889ರಲ್ಲಿ ರಷ್ಯದ ಉತ್ತರ ತುದಿಯ ವೊಲೊಗ್ಡಾ ಪ್ರಾಂತದ ಕುಗ್ರಾಮವೊಂದರಲ್ಲಿ ಉಗ್ರೊಫಿನ್ನಿಷ್ ಮೂಲದ ಕೋಮಿ ಜನಾಂಗದಲ್ಲಿ ಹುಟ್ಟಿದ. 3ವರ್ಷದ ಪ್ರಾಯದಲ್ಲಿ ತಾಯಿಯನ್ನು ಕಳೆದುಕೊಂಡ. ನಂತರ ಬಣ್ಣಹಾಕುವ ಉದ್ಯೋಗಮಾಡುತ್ತಿದ್ದ ಕುಡುಕ ತಂದೆಯ ಪೆಟ್ಟು ತಿನ್ನಲಾರದೆ 10ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ ಊರೂರು ಅಲೆದು ಬಣ್ಣಹಾಕುವುದಲ್ಲದೆ ಆ ಈ ಕೆಲಸಮಾಡುತ್ತ ಕ್ರೈಸ್ತ ಮಠದ ಶಾಲೆಸೇರಿ, ಅಲ್ಲಿ ಝಾರ್ ವಿರೋಧಿ ವಿದ್ಯಾರ್ಥಿಗಳ ಸಹವಾಸದ ಫಲವಾಗಿ 17ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಜೈಲು ಕಂಡ. ಮುಂದೆ ಅನೇಕ ಬಾರಿ ಜೈಲುಕಂಡರೂ ಅದೃಷ್ಟ ವಶಾತ್ ಸೇಂಟ್ ಪೀಟರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಅಲ್ಲಿಯೇ ಶಿಕ್ಷಕನೂ ಆದ, ಜಾರ್ ವಿರೋಧಿ ಚಳವಳಿಯಲ್ಲಿ ಮುಂದುವರಿದರೂ ಅನಂತರ ಕಮ್ಯುನಿಸ್ಟ್ ಚಳವಳಿಯ ಅತಿರೇಕಗಳನ್ನು ಖಂಡಿಸಿದ್ದರಿಂದ ಬೊಲ್ಶವಿಕ್ ವಿರೋಧಿ ಎಂಬ ಆಪಾದನೆಯಿಂದಾಗಿ ಅವರ ಕಿರುಕುಳ ಮತ್ತು ಸೆರೆಮನೆ ಅನುಭವಿಸಿದ್ದಲ್ಲದೆ ಪ್ರಾಣ ಕಳೆದು ಕೊಳ್ಳುವ ಸ್ಥಿತಿ ಬಂತು. ಅವನ ಹಿತೈಷಿಗಳು ಮಧ್ಯ ಪ್ರವೇಶಿಸಿದ್ದರಿಂದ ಲೆನಿನ್‍ನ ವಿಶೇಷ ಅನುಮತಿ ಮೇರೆಗೆ ಪ್ರಾಣ ಉಳಿಯಿತು; ಆದರೆ ದೇಶಬಿಟ್ಟು ಹೊರಹೋಗಬೇಕಾಯಿತು. ಕೆಲಕಾಲ ಚೆಕೊಸ್ಲೂವಾಕಿಯ ದಲ್ಲಿದ್ದ ಮೇಲೆ ಅಮೆರಿಕಕ್ಕೆ ವಲಸೆಬಂದು ಮೊದಲು ಮಿನ್ನೆಸೊಟಾದಲ್ಲಿದ್ದು ಅನಂತರ ಶೇಷಾಯುಷ್ಯವನ್ನು ಸುಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕಳೆದ. ಅಲ್ಲಿರುವಾಗ ಪ್ರಸಿದ್ಧ ಶಿಷ್ಯರ ಬಳಗ ದೊರೆಯಿತಾದರೂ ತನ್ನ ವಿಚಾರ ಮತ್ತು ವ್ಯಕ್ತಿತ್ವದ ವೈಲಕ್ಷ್ಯಣ್ಯಗಳಿಂದಾಗಿ ಕೊನೆಯ ದಿನಗಳಲ್ಲಿ ವಿದ್ವತ್ಸಮೂಹದ ಉಪೇಕ್ಷೆಗೆ ಒಳಗಾದ. ಆದರೂ ಪ್ರಪಂಚವಿಖ್ಯಾತ ವಿದ್ವಾಂಸರಾದ ಆರ್ನಾಲ್ಡ್ ಟಾಯನ್‍ಬಿ, ಕೊರ್ರಾಡೊ ಗಿನಿ, ನ್ಯೂನೆಜ್, ಲಿಯೊಪೋಲ್ಡ್ ವಾನ್‍ವೇಸರಂಥವರ ಆದರಕ್ಕೆ ಪಾತ್ರವಾಗಿದ್ದಾನೆ. ಇವನನ್ನು ಆಗಸ್ಟ್‍ಕಾಂಟ್, ಡರ್ಕೀಮ್, ಸ್ಪೆಂಗ್ಲರ್ ಮುಂತಾದವರಿಗಿಂತ ಮಿಗಿಲಾದ ಚಿಂತಕನೆಂದು ತಿಳಿಯಲಾಗುತ್ತದೆ.
	ಕಾರ್ಲ ಜಿóಮ್ಮರಮನ್‍ನೊಡನೆ ಬರೆದ ಗ್ರಾಮೀಣ ಸಮಾಜಶಾಸ್ತ್ರದ ಮೇಲಿನ ಎರಡು ಗ್ರಂಥಗಳು ಹಾಗೂ ಸಮಾಜಶಾಸ್ತ್ರದ ಸಿದ್ಧಾಂತಗಳ ಸಮೀಕ್ಷೆಮಾಡುವ ಎರಡು ಗ್ರಂಥಗಳು ಆಯಾ ಕ್ಷೇತ್ರಗಳಲ್ಲಿ ಆಚಾರ್ಯ ಕೃತಿಗಳೆಂದು ಶೈಕ್ಷಣಿಕ ವಲಯಗಳಲ್ಲಿ ಮನ್ನಣೆ ಪಡೆದಿದ್ದರೂ ಇವನ ಖ್ಯಾತಿ ನಿಂತಿರುವುದು, ಇವನು ಸಾಮಾಜಿಕ ಕ್ರಾಂತಿ, ಸಾಮಾಜಿಕ-ಸಾಂಸ್ಕøತಿಕ ಚಲನೆ, ಸಂಕ್ರಾಂತಿ ಕಾಲದ ಮಾನವ ವರ್ತನೆ, ಪರಹಿತನಿಷ್ಠ ಪ್ರೇಮದ ರೀತಿ-ಶಕ್ತಿ ಮುಂತಾದ ವಿಷಯಗಳ ಮೇಲೆ ಇವನು ಬರೆದಿರುವ ಗ್ರಂಥಗಳಿಂದಾಗಿ. ಅದರಲ್ಲೂ ಮುಖ್ಯವಾಗಿ ಇವನ ನಾಲ್ಕು ಸಂಪುಟಗಳ ಸೋಷಿಯಲ್ ಆ್ಯಂಡ್ ಕಲ್ಚರಲ್ ಡೈನಮಿಕ್ಸ್ ಈಗ ಕ್ಲಾಸಿಕ್ ಎನ್ನಿಸಿಕೊಂಡಿದೆ. ಕೆಲವು ಗ್ರಂಥಗಳು ಸು. 30 ಭಾಷೆಗಳಲ್ಲಿ ಅನುವಾದಗೊಂಡಿವೆ. ಅನೇಕ ಆವೃತ್ತಿಗಳನ್ನು ಕಂಡಿವೆ ಮಾನವತೆಯ ಪುನರ್ ರಚನೆಯ ಭಾರತೀಯ ಆವೃತ್ತಿಯನ್ನು ಈತ ಮಹಾತ್ಮಾಗಾಂಧಿ ಯವರಿಗೆ ಅರ್ಪಿಸಿದ್ದಾನೆ. ಜೀವಿತದ ಕೊನೆಗೆ ಇವನು ಪರಹಿತನಿಷ್ಠ ಮಾನವ ಪ್ರೇಮದ ಆರಾಧಕನೂ ದಾರ್ಶನಿಕನೂ ಆದದ್ದನ್ನು ಕಾಣಬಹುದು.

	ಇವನ ಮಹತ್ತ್ವದ ಕೃತಿಗಳೆಲ್ಲ ಕಾಲದ ಚಲನೆ ಮತ್ತು ಸಾಮಾಜಿಕ ಪರಿವರ್ತನೆಯನ್ನು ವಿಶ್ಲೇಷಿಸುತ್ತವೆ. ಕ್ರಾಂತಿ, ಸಾಮಾಜಿಕಸಂಚಲನೆ, ಕಾರ್ಯಕಾರಣಸಂಬಂಧ, ಕಾಲ-ದೇಶ-ಸಾಮಾಜಿಕ ಸಾಂಸ್ಕøತಿಕ ಸಂಚಲನೆ ಇವೆಲ್ಲ ಅವನ ವಿಶೇಷ ಪರಿಶ್ರಮ ಮತ್ತು ಪರಿಣತಿಯ ಕ್ಷೇತ್ರಗಳು.

	ವಿವಿಧ ನಾಗರಿಕತೆಗಳ ಹುಟ್ಟು, ಬೆಳೆವಣಿಗೆ, ಅವನತಿ, ವೈಶಿಷ್ಟ್ಯ ಗಳನ್ನು ಐತಿಹಾಸಿಕವಾಗಿಯೂ ತುಲನಾತ್ಮಕವಾಗಿಯೂ ನೋಡಿ, ಅಂಕಿ-ಸಂಖ್ಯೆ-ಕೋಷ್ಟಕಗಳನ್ನು ಹೋಲಿಸಿನೋಡಿ ಇವನು ಮೂರು ರೀತಿಯ ಸಾಂಸ್ಕøತಿಕ ವ್ಯವಸ್ಥೆಗಳನ್ನು ಗುರುತಿಸುತ್ತಾನೆ. (1) ಇಂದ್ರಿಯ ಪ್ರಧಾನ ವಾದ ಸೆನ್ಸೇಟ್, (2) ಆಧ್ಯಾತ್ಮ-ಸುಪ್ರಮಾನಸ ಪ್ರಧಾನ ಐಡಿಯೇಶನಲ್ ಮತ್ತು (3) ಇವೆರಡರ ಸಮನ್ವಯವೆನಿಸುವ ಐಡಿಯಲಿಸ್ಟಿಕ್ ಸಂಸ್ಕøತಿ. ಪ್ರತಿಯೊಂದು ಸಂಸ್ಕøತಿಯೂ ಈ ಮೂರು ಅವಸ್ಥಾಂತರಗಳನ್ನು ಚಕ್ರಾವರ್ತನ ರೀತಿಯಲ್ಲಿ ಪಡೆಯುತ್ತದೆ. ಕೆಲಕಾಲ ಅದು ಏಕಮುಖವಾಗಿ ಬೆಳೆದು ನಂತರ ಅಂತಸ್ಥ ಶಕ್ತಿಗಳ ಕಾರಣದಿಂದಾಗಿ ದಿಕ್ಕುಬದಲಿಸಿ ಹೊಸಹಾದಿ ಹಿಡಿದು ಮತ್ತೊಂದು ಮಗದೊಂದು ದಿಕ್ಕಿಗೆ ತಿರುಗಿ, ಒಂದು ಮಿತಿಯೊಳಗೆ ಚಲಿಸುತ್ತ ಪುನಃ ಹಳೆಯ ಜಾಡಿಗೆ ಬರುವುದರೊಂದಿಗೆ ಒಂದು ಚಕ್ರವನ್ನು ಮುಗಿಸುತ್ತದೆ. ಇದು ಇವನು ಹೇಳಿದ ಸಾಮಾಜಿಕ ಪರಿವರ್ತನೆಯ ಅಸ್ಥಿರಚಕ್ರಾವರ್ತನ ಸಿದ್ಧಾಂತ. ಇತರ ಸಿದ್ಧಾಂತಕಾರರು ಹೇಳಿದ್ದಕ್ಕಿಂತ ಭಿನ್ನ. ಇಲ್ಲಿ ಏಕಮುಖ ಪರಿವರ್ತನೆಯಿಲ್ಲ; ಬಾಹ್ಯಶಕ್ತಿಗಳೇ ಪರಿವರ್ತನೆಯನ್ನು ತರುತ್ತವೆಂಬ ವಾದವಿಲ್ಲ, ಸ್ಪೆಂಗ್ಲರ್ ನಾಗರಿಕತೆಗಳ ಹುಟ್ಟು ಬೆಳೆವಣಿಗೆ-ಸಾವುಗಳನ್ನು ಹೇಳಿದ್ದಾನೆ. ಆದರೆ ಸಾರೊಕಿನ್‍ನ ಸಂಸ್ಕøತಿಗೆ ಸಾವಿಲ್ಲ, ಕೇವಲ ಪರಿವರ್ತನೆಯಿದೆ ಎನ್ನುತ್ತಾನೆ.

	ಇಂದ್ರಿಯಗಳಿಂದ ಗ್ರಹಿಸಿದ್ದನ್ನು ಮಾತ್ರ ಸತ್ಯವೆಂದು ನಂಬುವುದು, ವಿಜ್ಞಾನದ ಪ್ರತ್ಯಕ್ಷ ಪ್ರಮಾಣಗಳನ್ನು ಮಾತ್ರ ಒಪ್ಪುವುದು, ದೈವವನ್ನು ಅಲ್ಲಗಳೆಯುವುದು, ವಿಷಯಾಸಕ್ತಿಗೆ ಮಣೆಹಾಕುವುದು, ಪ್ರಯೋಜನೈಕ್ಯ ವಾದವನ್ನು ವೈಭವೀಕರಿಸುವುದು ಇಂದ್ರಿಯ ಪ್ರಧಾನ ಸಂಸ್ಕøತಿಯ ಮುಖ್ಯಲಕ್ಷಣಗಳು. ಕ್ರಿ.ಪೂ. 4ರಿಂದ ಕ್ರಿ.ಶ. 3ನೆಯ ಶತಮಾನದವರೆಗಿನ ಗ್ರೀಕರ ಮತ್ತು ರೋಮನ್ನರ ಸಂಸ್ಕøತಿಯೂ 15ನೆಯ ಶತಮಾನದಿಂದೀಚೆಗಿನ ಪಾಶ್ಚಿಮಾತ್ಯ ಸಂಸ್ಕøತಿಯೂ ದೀರ್ಘಕಾಲ ಖಂಡದ ಚೀನೀ ಸಂಸ್ಕøತಿಯೂ ಕೆಲವು ಉದಾಹರಣೆಗಳು. ಆಧ್ಯಾತ್ಮಿಕ-ಸುಪ್ರಮಾನಸ ಸಂಸ್ಕøತಿ ಇದರ ಇನ್ನೊಂದು ಧ್ರುವ. ಇಲ್ಲಿ ಅತೀಂದ್ರಿಯ ಆಧ್ಯಾತ್ಮ ಮೌಲ್ಯಗಳೇ ಪರಮಸತ್ಯಗಳು. ಇಂದ್ರಿಯ ಗಮ್ಯವು ಕೇವಲ ಭ್ರಮೆ ಅಥವಾ ಮಾಯೆ. ಇದನ್ನು ದೈವ ಆವೃತವೆಂದೂ ಧರ್ಮಪ್ರಧಾನವೆಂದೂ ಪರಲೋಕ ಪಿಪಾಸುವೆಂದೂ ಬೇಕಾದರೆ ವರ್ಣಿಸಬಹುದು. ತಾವೋ ಕಾಲದ ಚೀನ, ಕ್ರಿ.ಪೂ 5ನೆಯ ಶತಮಾನದ ಮೊದಲಿನ ಗ್ರೀಸ್, ಬ್ರಾಹ್ಮಣ-ಬೌದ್ಧ ಕಾಲೀನ ಭಾರತ, ಮಧ್ಯಯುಗೀನ ಯುರೋಪ್, ಆದಿವಾಸಿ ಹೋಪಿ ಇಂಡಿಯನ್ ಮತ್ತು ಜûುನಿ ಇಂಡಿಯನ್ ಇವೆಲ್ಲ ಇಂಥ ಸಂಸ್ಕøತಿಯ ಉದಾಹರಣೆಗಳು. ಇವನು ಹೇಳಿದ ಮೂರನೆಯ ಪ್ರಕಾರವಾದ ಐಡಿಯಲಿಸ್ಟಿಕ್ ಸಂಸ್ಕøತಿಯು ಮಿಶ್ರಪ್ರಕಾರ. ಈ ಮೂರು ಸಂಸ್ಕøತಿ ಪ್ರಕಾರಗಳು ಒಂದರ ನಂತರ ಒಂದಾಗಿ ಚಕ್ರಗತಿಯಲ್ಲಿ ಆವರ್ತಿಸುತ್ತವೆ ಎಂಬುದು ಕಂಡುಹಿಡಿದ ಸಿದ್ಧಾಂತ ಸು. 30 ವರ್ಷಗಳ ಸತತ ಪರಿಶ್ರಮ; ಅನೇಕ ಸಾವಿರ ಪುಟಗಳ ಓದು ಮತ್ತು ವಿಪುಲ ಮಾಹಿತಿ ಸಂಗ್ರಹದಿಂದ ಈತ ಕಂಡುಕೊಂಡ ಸಿದ್ಧಾಂತ. ಪಾಶ್ಚಿಮಾತ್ಯ ನಾಗರಿಕತೆ ಸುಖಸಾಧನಗಳನ್ನೂ ವಿಷಯ ಸುಖದ ವೈವಿಧ್ಯಗಳನ್ನೂ ಗುಂಡಿ ಒತ್ತು ವ್ಶೆಜ್ಞಾನಿಕ ಅದ್ಭುತಗಳನ್ನೂ ಅನುಭವಿಸಿ, ಅದರ ಪರಾಕಾಷ್ಠೆಯನ್ನು ಮುಟ್ಟಿದ ಅನಂತರ, ಇಂದ್ರಿಯ ಪ್ರಧಾನ ಸಂಸ್ಕøತಿ ಕಳಿತು ಬಿದ್ದುಹೋಗುವುದೆಂದೂ ಆನಂತರ ಆಧ್ಯಾತ್ಮಿಕ ಐಡಿಯೇಶನಲ್ ಸಂಸ್ಕøತಿ ನಿಧಾನವಾಗಿ ಬೆಳೆಯುವುದೆಂದೂ ಮಾನವ ಸೃಜನತೆಯ ಕೇಂದ್ರವು ಯುರೋಪಿನಿಂದ ಪೆಸಿಫಿಕ್ ಅಟ್ಲಾಂಟಿಕ್ ಕಡೆಗೆ ಚಲಿಸುತ್ತದೆಂದೂ ಈತ ಭವಿಷ್ಯ ನುಡಿದಿದ್ದಾನೆ. ಆದರೆ ಇವೆಲ್ಲ ದಾರ್ಶನಿಕನ ಕಾಣ್ಕೆಗಳು, ಸಮಾಜಶಾಸ್ತ್ರದ ಸಿದ್ಧಾಂತಗಳಲ್ಲವೆಂದು ಅವನ ಟೀಕಾಕಾರರು ಆಕ್ಷೇಪಿಸಿದ್ದಾರೆ.	
		(ಎಚ್.ವಿ.ಎನ್.)
	              		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ